ತಂಡಗ -
ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಒಂದು ಗ್ರಾಮ. ಹಳೆ ತಂಡಗ ಎಂದೂ ಇದಕ್ಕೆ ಹೆಸರುಂಟು. ತುರುವೇಕೆರೆಯಿಂದ 11 ಕಿಮೀ. ದೂರದಲ್ಲಿದೆ. ಜನಸಂಖ್ಯೆ 1,645 (1971). ಇದು ಶಾಲಿವಾಹನನ ಜನ್ಮ ಸ್ಥಳವೆಂದು ಪ್ರತೀತಿ. ಹಿಂದೆ ಇದು ಶಂಕರನಾರಯಣಪುರ ಎಂಬ ಹೆಸರಿನ ಒಂದು ಅಗ್ರಹಾರವಾಗಿತ್ತೆಂದು ಶಾಸನಗಳಿಂದ ತಿಳಿಯುತ್ತದೆ. ಇಲ್ಲಿಯ ಚನ್ನಕೇಶವ ದೇವಾಲಯ ಹೊಯ್ಸಳ ಶೈಲಿಯದು. ಇದು 14ನೆಯ ಶತಮಾನದಲ್ಲಿ ನಿರ್ಮಿತವಾದ್ದು. ದೇವಸ್ಥಾನದ ಪ್ರತಿಯೊಂದು ವಾಸ್ತುಭಾಗದ ಮೇಲೂ ಕಟ್ಟಡದಲ್ಲಿ ಅದರ ಸ್ಥಾನ, ಕಟ್ಟಡದ ಬಗ್ಗೆ ನಿರ್ದೇಶನ ಇವುಗಳನ್ನು ಸೂಚಿಸುವ ವಿವರಗಳನ್ನು ಕೆತ್ತಿರುವುದು ಒಂದು ವೈಶಿಷ್ಯ. ಮಲ್ಲೇಶ್ವರ ಅಥವಾ ಮೂಲ ಸ್ಥಾನೇಶ್ವರನದು ಇನ್ನೊಂದು ದೇವಾಲಯ. ಈಶ್ವರ ದೇವಸ್ಥಾನವೊಂದರ ಭಾಗಗಳನ್ನು ಬಳಸಿರುವಂತೆ ಕಾಣುತ್ತದೆ. ಹಳೆಯ ದ್ರಾವಿಡ ಶೈಲಿಯಲ್ಲಿರುವ ಈ ದೇವಸ್ಥಾನದ ಕಂಬಗಳ ಮೇಲೆ ಉತ್ಕøಷ್ಟ ಕೆತ್ತನೆಗಳಿವೆ. ಈಶ್ವರ ದೇವಸ್ಥಾನದಲ್ಲಿ ಕಣ್ಣಪ್ಪ, ಅರ್ಜುನ, ಲಿಂಗೋದ್ಭವ ಮೂರ್ತಿ, ವ್ಯಾಘ್ರಪಾದ ಈ ಮೂರ್ತಿಗಳು ಗಮನಾರ್ಹ. ನವರಂಗದ ಬಲಭಾಗದಲ್ಲಿ ಸು. 5 ಅಡಿ ಎತ್ತರದ ವಿಗ್ರಹವೊಂದಿದೆ. ಇದು ಬಹಳ ಮಟ್ಟಿಗೆ ಮುಕ್ಕಾಗಿದೆ. ಇದು ಯಾವ ಮೂರ್ತಿಯೆಂಬುದು ಗೊತ್ತಿಲ್ಲ. ಅಲ್ಲಿಯ ಜನ ಇದನ್ನು ಕಂಚಿನ ದೇವರು ಎಂದು ಕರೆಯುತ್ತಾರೆ. ಈ ಊರಿಗೆ ಒಂದೂವರೆ ಕಿಮೀ. ದೂರದಲ್ಲಿರುವ ಕುಂಬಾರರ ಕರೀಕಲ್ಲು ಗುಡ್ಡಗವಿಯಲ್ಲಿ ಗವಿಸಿದ್ಧೇಶ್ವ ಎಂಬ ಒಂದು ಶಿವಲಿಂಗವಿದೆ. ಈಚೆಗೆ ಇದೊಂದು ಯಾತ್ರಸ್ಥಳ. ಸುಂಕಿಮಾರಿ (ಸೋಕಿನ ಮಾರಿ) ಎಂಬ ದೇವತೆಯ ಪೂಜೆ ಈ ಊರಿನಲ್ಲಿ ವರ್ಷಕ್ಕೊಮ್ಮೆ ನಡೆಯುತ್ತದೆ. ಪ್ರತಿ ಶನಿವಾರ ಸಂತೆ ನಡೆಯುತ್ತದೆ. ಇಲ್ಲಿ ಒಂದು ಖಾಸಗಿ ಪ್ರೌಢಶಾಲೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶುವೈದ್ಯಶಾಲೆ ಇವೆ.
(ಎಸ್.ಎನ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ